ಲೇಖನ-೨ ಸ್ವಾಭಿಮಾನ ಮತ್ತು ಸ್ವಯಂ-ದಕ್ಷತೆ
ಸ್ವಾಭಿಮಾನ ಎಂದರೇನು?
ಒಬ್ಬ ವ್ಯಕ್ತಿಯ ಧನಾತ್ಮಕ ಮತ್ತು ಋಣಾತ್ಮಕ ಮೌಲ್ಯೀಕರಣವೇ ಸ್ವಾಭಿಮಾನ. ಅಂದರೆ ಸ್ವಾಭಿಮಾನವು ವ್ಯಕ್ತಿಯು ತನ್ನ ಬಗ್ಗೆ ಏನೆಂದು ಭಾವಿಸುತ್ತಾನೆ? ಎಂಬುದನ್ನು ತಿಳಿಸುತ್ತದೆ. ಇದು ಹೆಚ್ಚಾಗಿ ಸ್ವಯಂ ಪರಿಕಲ್ಪನೆಯ ಮೇಲೆ ಅವಲಂಬಿತವಾಗಿರುತ್ತದೆ. ಸ್ವಾಭಿಮಾನವು ನಮ್ಮ ಧನಾತ್ಮಕ ಮತ್ತು ಋಣಾತ್ಮಕ ಜೀವನಾನುಭವಗಳ ಮೌಲ್ಯೀಕರಣವಷ್ಟೇ ಅಲ್ಲದೇ ನಾವು ನಮ್ಮನ್ನು ನಮ್ಮದೇ ಆಂತರಿಕ ಮಾನದಂಡಗಳೊಂದಿಗೆ ಹಾಗೂ ಸಮಾಜದಲ್ಲಿ ಇತರರೊಂದಿಗೆ ಹೋಲಿಕೆ ಮಾಡಿ ಕೊಳ್ಳುವುದರಿಂದ ರೂಪಿತಗೊಳ್ಳುತ್ತದೆ. ಯಾವಾಗ ಈ ಎಲ್ಲಾ ಮೌಲ್ಯೀಕರಣಗಳು ಸ್ವಯಂ ಪೂರ್ವಾಗ್ರಹಗಳ ಮೂಲಕ ಶೋಧಿಸಲ್ಪಡುತ್ತದೆ, ಆವಾಗ ಸ್ವಾಭಿಮಾನ ರೂಪುಗೊಳ್ಳುತ್ತದೆ. ನಮ್ಮ ಎಲ್ಲಾ ಆಲೋಚನೆಗಳು, ಭಾವನೆಗಳು ಕಾರ್ಯಾಚರಣೆಗಳನ್ನು ನಿರ್ದೇಶಿಸುವಲ್ಲಿ ನಮ್ಮ ಸ್ವಯಂ ಬಹಳ ಮಹತ್ತರ ಪಾತ್ರವನ್ನು ವಹಿಸುತ್ತದೆ. ಇದರಿಂದಾಗಿ ಸ್ವಾಭಿಮಾನವು ಒಬ್ಬ ವ್ಯಕ್ತಿಯ ಆತ್ಮ ಗೌರವದ ಪ್ರಜ್ಞೆಯ.
ಧನಾತ್ಮಕ ಸ್ವಯಂ ಪರಿಕಲ್ಪನೆಯುಳ್ಳ ಒಬ್ಬ ವ್ಯಕ್ತಿಯು ಆರೋಗ್ಯಪೂರ್ಣ ಸ್ವಾಭಿಮಾನವನ್ನು ಪ್ರತಿ ಬಿಂಬಿಸುತ್ತಾನೆ. ಅಲ್ಲದೇ, ಇದು ಆತನಲ್ಲಿ ಸಂತೋಷ ಹಾಗೂ ಧನಾತ್ಮಕ ಮಾನಸಿಕ ಯೋಗಕ್ಷೇಮದ ವೃದ್ಧಿಗೆ ಪೂರಕವಾಗುತ್ತದೆ. ಇಂತಹ ವ್ಯಕ್ತಿಗಳು ಸಾಮಾನ್ಯವಾಗಿ ಸಂತೋಷ ಭರಿತವಾದ ಜೀವನವನ್ನು ನಡೆಸುತ್ತಾರೆ ಹಾಗೂ ತಮ್ಮೊಂದಿಗೆ ಸಂವಹಿಸುವ ಎಲ್ಲರೊಂದಿಗೂ ಸಂತೋಷವನ್ನು ಹರಡುತ್ತಾರೆ. ಯಾವ ವ್ಯಕ್ತಿಗಳು ಆರೋಗ್ಯಪೂರ್ಣ ಸ್ವಯಂ ಪರಿಕಲ್ಪನೆಯನ್ನು ಬೆಳೆಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ, ಅಂತಹ ವ್ಯಕ್ತಿಗಳು ಸಾಮಾನ್ಯವಾಗಿ ಕಡಿಮೆ ಮಟ್ಟದ ಸ್ವಾಭಿಮಾನವನ್ನು ಬೆಳಸಿ ಕೊಳ್ಳುತ್ತಾರೆ. ಸ್ವಯಂ- ಮೌಲ್ಯದ ಕೊರತೆ ಕೂಡ ಕಡಿಮೆ ಮಟ್ಟದ ಸ್ವಾಭಿಮಾನಕ್ಕೆ ಕಾರಣವಾಗುತ್ತದೆ. ನೀವು ಉತ್ತಮ ಸ್ವಾಭಿಮಾನವನ್ನು ಬೆಳಸಿ ಕೊಳ್ಳಬೇಕೆಂದರೆ, ನಿಮ್ಮ ಶಕ್ತಿ ಸಾಮರ್ಥ್ಯಗಳ ಹಾಗೂ ನಿಮ್ಮ ಕುಂದುಕೊರತೆಗಳ ಬಗ್ಗೆ ಅರಿತುಕೊಳ್ಳುವುದು ಬಹಳ ಮುಖ್ಯ. ಇದು ನಿಮ್ಮ ಹಾಗೂ ನಿಮ್ಮ ಕುಟುಂಬ ಸದಸ್ಯರುಗಳು, ಸ್ನೇಹಿತರುಗಳು, ಸಹೋದ್ಯೋಗಿಗಳು ಹಾಗೂ ಇತರೆ ವ್ಯಕ್ತಿಗಳೊಂದಿಗೆ ಆರೋಗ್ಯಕರ ಮಾನಸಿಕ ಪರಸ್ಪರ ಸಂಬಂಧಗಳನ್ನು ಗಟ್ಟಿಗೊಳಿಸಲು ಸಹಾಯಕಾರಿ ಆಗುತ್ತದೆ. ನಮ್ಮ ಕೆಲಸಗಳಿಗೆ ಹೆಚ್ಚಿನ ಮನ್ನಣೆ ದೊರೆತಾಗ ನಮ್ಮ ಸ್ವಾಭಿಮಾನದ ಮಟ್ಟ ಹೆಚ್ಚಾಗುವುದು ಕಂಡುಬರುತ್ತದೆ. ಹಾಗೆಯೇ, ನಮ್ಮ ಕೆಲಸಗಳಿಗೆ ನಿಂದನೆ ದೊರತರೆ ಅದು ಕುಂದುವುದನ್ನು ಕಾಣುತ್ತೇವೆ. ನಮ್ಮ ಸ್ವಯಂ-ದಕ್ಷತೆಯೂ ಕೂಡಾ ನಮ್ಮ ಸ್ವಾಭಿಮಾನದ ಮೇಲೆ ಅವಲಂಬಿತವಾಗಿರುತ್ತದೆ.
ಪ್ರಮುಖ ಸಾರಾಂಶಗಳು:
- ಒಬ್ಬ ವ್ಯಕ್ತಿಯ ಧನಾತ್ಮಕ ಮತ್ತು ಋಣಾತ್ಮಕ ಮೌಲ್ಯೀಕರಣವೇ ಸ್ವಾಭಿಮಾನ ಆದ್ದರಿಂದ ಇದು ಒಬ್ಬ ವ್ಯಕ್ತಿಯ ಸ್ವಯಂ- ಮೌಲ್ಯೀಕರಣಕ್ಕೆ ಸಂಬಂಧ ಪಟ್ಟಿದೆ.
- ಧನಾತ್ಮಕ ಸ್ವಯಂ ಪರಿಕಲ್ಪನೆಯುಳ್ಳ ಒಬ್ಬ ವ್ಯಕ್ತಿಯು ಆರೋಗ್ಯಪೂರ್ಣ ಸ್ವಾಭಿಮಾನವನ್ನು ಪ್ರತಿ ಬಿಂಬಿಸುತ್ತಾನೆ ಆದರೆ ಋಣಾತ್ಮಕ ಸ್ವಯಂ ಪರಿಕಲ್ಪನೆಯನ್ನು ಹೊಂದಿರುವ ವ್ಯಕ್ತಿಯು ಕಡಿಮೆ ಮಟ್ಟದ ಸ್ವಾಭಿಮಾನವನ್ನು ಬೆಳಸಿ ಕೊಳ್ಳುತ್ತಾರೆ.
- ಒಂದು ನಿರ್ದಿಷ್ಟ ಪರಿಸ್ಥಿತಿಯಲ್ಲಿ ಯಶಸ್ವಿಯಾಗಲು ವ್ಯಕ್ತಿಯು ತನ್ನ ಸಾಮರ್ಥ್ಯದ ಮೇಲೆ ಇಡುವ ನಂಬಿಕೆಯೇ ಸ್ವಯಂ-ದಕ್ಷತೆ.
- ಮನೋವಿಜ್ಞಾನದಲ್ಲಿ ಸ್ವಯಂ-ದಕ್ಷತೆ ಎಂದರೆ ವ್ಯಕ್ತಿಯು ತನ್ನ ನಿರ್ದಿಷ್ಟ ಕಾರ್ಯಕ್ಷಮತೆ ಸಾಧನೆಯನ್ನು ಹೊರಸೂಸುವಲ್ಲಿ ತನ್ನ ವರ್ತನೆಗಳ ಸಾಮರ್ಥ್ಯದ ಮೇಲೆ ಇಡುವ ನಂಬಿಕೆಯಾಗಿದೆ.
- ಪಾಂಡಿತ್ಯಪೂರ್ಣ ಅನುಭವಗಳು, ವೈವಿಧ್ಯಪೂರ್ಣ ಅನುಭವಗಳು, ಸಾಮಾಜಿಕ ಮನವೊಲಿಕೆ ಮತ್ತು ಶಾರೀರಿಕ ಹಾಗೂ ಭಾವನಾತ್ಮಕ ಸ್ಥಿತಿಗಳು - ಇವುಗಳು ಸ್ವಯಂ-ದಕ್ಷತೆಯ ನಾಲ್ಕು ಪ್ರಮುಖ ಅಂಶಗಳಾಗಿವೆ.
- ಒಬ್ಬ ವ್ಯಕ್ತಿಯು ಸ್ವಯಂ-ದಕ್ಷತೆಯ ಮಟ್ಟವನ್ನು ತನ್ನ ಸ್ವ ಪ್ರಯತ್ನದಿಂದ ಹಾಗೂ ಕೆಲವು ತಂತ್ರಗಳನ್ನು ಅನುಸರಿಸಿ ಹೆಚ್ಚಿಸಿಕೊಳ್ಳಬಹುದು.
ಸ್ವಾರಸ್ಯಕರ ಸಂಗತಿ :
ಒಂದು ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿ ಒಬ್ಬಳು ತನ್ನನ್ನು ಅನಾಸಕ್ತ ಹಾಗೂ ಅನಾಕರ್ಷಕ ವ್ಯಕ್ತಿ ಎಂದು ಭಾವಿಸಿದ್ದಳು. ಅವಳು ಸದಾಕಾಲವೂ ಮಂಕಾದ ಮುಖಲಕ್ಷಣ ಹೊಂದಿದ್ದು, ಇತರರೊಂದಿಗೆ ಸಂವಹನ ನಡೆಸಲು ಹಿಂಜರಿಯುತ್ತಿದ್ದಳು ಹಾಗೂ ತನ್ನಷ್ಟಕ್ಕೆ ತಾನೇ ಇರುತ್ತಿದ್ದಳು. ಒಂದು ದಿನ ಅವಳು ಕಛೇರಿಗೆ ಹೋಗುವ ದಾರಿಯಲ್ಲಿ ಒಂದು ಬಳೆ ಅಂಗಡಿಯಲ್ಲಿ ಪ್ರದರ್ಶನಕ್ಕೆ ಇಡಲಾದ ಸುಂದರವಾದ ಜಡೆಬಿಲ್ಲೆ (ಹೇರ್ ಕ್ಲಿಪ್) ಕಂಡು ಆಸಕ್ತಳಾಗಿ ಅಂಗಡಿಯೊಳಗೆ ಹೋಗುತ್ತಾಳೆ. ಅಂಗಡಿಯ ಹುಡುಗಿಗೆ ಆ ಜಡೆಬಿಲ್ಲೆ ತೋರಿಸುವಂತೆ ಕೇಳುತ್ತಾಳೆ ಹಾಗೂ ಜಡೆಗೆ ಧರಿಸಿ ನೋಡುತ್ತಾಳೆ. ಅಂಗಡಿಯ ಹುಡುಗಿಯು ಅವಳ ಜಡೆಗೆ ಈ ಬಿಲ್ಲೆ ಬಹಳ ಚೆನ್ನಾಗಿ ಒಪ್ಪುತ್ಥಿದೆ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾಳೆ. ಆಗ ಮಹಿಳೆಯು ಆ ಜಡೆಬಿಲ್ಲೆಯ ಹಣವನ್ನು ಪಾವತಿಸಿ ತಲೆಎತ್ತಿಕೊಂಡು ಹೊರನಡೆಯುತ್ತಾಳೆ.
ಹೊರಗೆ ಅವರ ಸುತ್ತಲೂ ಇರುವ ಜನರು ಅವಳನ್ನೇ ಗಮನ ಹರಿಸಿ ನೋಡುತ್ತಿರುತ್ತಾರೆ. ಹೀಗೆ ನಡೆಯುತ್ತಾ ಅವಳು ತನ್ನ ಕಛೇರಿಯ ಒಳಗೆ ಬರುತ್ತಾಳೆ ಹಾಗೂ ಎಲ್ಲಾ ಸಿಬ್ಬಂದಿಗಳನ್ನು ಮುಗುಳುನಗೆ ಬೀರುತ್ತಾ ವಂದಿಸುತ್ತಾಳೆ. ಇತರೆ ಸಿಬ್ಬಂದಿಗಳು ಆಶ್ಚರ್ಯಕರವಾಗಿ ಈಕೆಯ ಕಡೆ ನೋಡಿ ಪ್ರತಿ ವಂದಿಸುತ್ತಾರೆ. ಆ ದಿನ ಅವಳ ಕೆಲಸಗಳು ಸುಗಮವಾಗಿ ಸಾಗುತ್ತದೆ. ಅವಳು ಮನೆಗೆ ಹಿಂದಿರುಗಿದ ಬಳಿಕ ತಾಯಿಗೆ ‘ಅಮ್ಮ ನನ್ನ ಹೊಸ ಜಡೆಬಿಲ್ಲೆ ನೋಡು. ಇದು ನನ್ನನ್ನು ಸುಂದರವಾಗಿ ಕಾಣುವಂತೆ ಮಾಡಿ, ಎಲ್ಲರೂ ನನ್ನ ಕಡೆಗೆ ನಗೆ ಬೀರುವಂತೆ ಮಾಡಿತು. ಇದನ್ನು ಕೊಂಡುಕೊಂಡು ಬಹಳ ಸಂತಸದಿಂದ ಇದ್ದೇನೆ.’ ಎಂದು ಹೇಳುತ್ತಾಳೆ. ಅವಳ ತಾಯಿಯು ಆಕೆಯನ್ನು ಆಶ್ಚರ್ಯದಿಂದ ನೋಡಿ ‘ಯಾವ ಜಡೆಬಿಲ್ಲೆ? ನನಗೆ ಯಾವುದೇ ಜಡೆಬಿಲ್ಲೆ ಕಾಣುತ್ತಿಲ್ಲ.’ ಎಂದು ಅವರು ಕೇಳುತ್ತಾರೆ. ಆಗ ಆ ಸಿಬ್ಬಂದಿಗೆ ತಾನು ಆ ಜಡೆಬಿಲ್ಲೆಯನ್ನು ಅಂಗಡಿಯಲ್ಲಿ ಹಣ ಪಾವತಿ ಮಾಡುವ ಸಮಯದಲ್ಲಿ ಬಿಚ್ಚಿಟ್ಟಿದ್ದು ಅದನ್ನು ಅಂಗಡಿಯಲ್ಲೇ ಮರೆತು ಬಂದಿರುವುದು ನೆನಪಾಗುತ್ತದೆ! ಇದನ್ನು ಪ್ಲಾಸಿಬೋ ಪರಿಣಾಮ ಎಂದು ಕರೆಯುತ್ತಾರೆ! ಸ್ವಯಂ-ದಕ್ಷತೆಯ ವೃದ್ಧಿಗೆ ಇದು ಅತ್ಯಂತ ಅವಶ್ಯಕವಾಗಿದೆ. ಅಲ್ಲವೇ?